ಕಾಂಗ್ರೀವ್, ವಿಲಿಯಂ

1670-1729 ರೆಸ್ಟೋರೇಷನ್ ಯುಗದ ಇಂಗ್ಲೀಷ್ ನಾಟಕಕಾರ. ಡಬ್ಲಿನ್ ವಿಶ್ವವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಿದ. ಅನಂತರ ಆಸ್ಥಾನದಲ್ಲಿ ಪ್ರಭಾವಶಾಲಿಯಾಗಿ ಲಾಭದಾಯಕವಾದ ಸ್ಥಾನಗಳನ್ನು ಪಡೆದು ಸುಖ ಕೀರ್ತಿಗಳನ್ನು ಸಂಪಾದಿಸಿದ. ಕಡೆಯ ವರ್ಷಗಳಲ್ಲಿ ದೃಷ್ಟಿಯನ್ನು ಕಳೆದುಕೊಂಡು ಬಹಳ ಕಷ್ಟಪಟ್ಟ. ಡ್ರೈಡನ್, ವ್ಯಾನ್ಬ್ರೂ, ಕಾಂಗ್ರೀವ್ ಮೊದಲಾದವರ ನಾಟಕಗಳಲ್ಲಿನ ಅಶ್ಲೀಲತೆಯನ್ನು ಜೆರಿಮಿ ಕಾಲಿಯರ್ ಖಂಡಿಸಿದಾಗ ಕಾಂಗ್ರೀವ್ ವಾದರಂಗಕ್ಕಿಳಿದನಾದರೂ ಗೆಲ್ಲಲಾಗಲಿಲ್ಲ. ಮೊದಲ ನಾಟಕವಾದ ದ ಓಲ್ಡ್ ಬ್ಯಾಚಲರ್ (1693) ಇವನಿಗೆ ಕೀರ್ತಿಯನ್ನು ತಂದಿತು. ಅನಂತರ ದಿ ಡಬಲ್ ಡೀಲರ್ (1693), ಲವ್ ಫಾರ್ ಲವ್ (1695) ಮತ್ತು ದ ವೇ ಆಫ್ ದಿ ವಲ್ರ್ಡ್ (1700) ಎನ್ನುವ ವಿನೋದ ನಾಟಕಗಳನ್ನೂ ದಿ ಮೌರ್ನಿಂಗ್ ಬ್ರೈಡ್ (1697) ಎನ್ನುವ ದುರಂತ ನಾಟಕವನ್ನೂ ರಚಿಸಿದ. ಕಾಲಿಯರನ ಖಂಡನೆಯೊಂದಿಗೆ ದ ವೇ ಆಫ್ ದಿ ವಲ್ರ್ಡ್ ನಾಟಕ ರಂಗಭೂಮಿಯ ಮೇಲೆ ಅಯಶಸ್ವಿಯಾದುದೂ ಸೇರಿತಾಗಿ ಕಾಂಗ್ರೀವ್ ನಾಟಕಗಳ ರಚನೆಯನ್ನು ನಿಲ್ಲಿಸಬೇಕಾಯಿತು. ದಿ ಮಾರ್‍ನಿಂಗ್ ಬ್ರೈಡ್ ರಂಗಭೂಮಿಯ ಮೇಲೆ ಯಶಸ್ವಿಯಾದರೂ ಅದು ಶ್ರೇಷ್ಠ ಕೃತಿಯೇನಲ್ಲ. ಅದರಲ್ಲಿನ ಪ್ರಾಸರಹಿತ ಸರಳ ರಗಳೆಯ (ಬ್ಲ್ಯಾಂಕ್ ವರ್ಸ್) ಬಳಕೆ ಮೆಚ್ಚುವಂಥದು. ಇಂಗ್ಲಿಷಿನಲ್ಲಿ ಹಾಸ್ಯನಾಟಕಗಳ ಕರ್ತೃಗಳ ಪ್ರಥಮ ಪಂಕ್ತಿಯಲ್ಲಿದ್ದಾನೆ, ಕಾಂಗ್ರೀವ್. ಪ್ರಣಯಾಸಕ್ತರಾದ ಎಲ್ಲ ವಯಸ್ಸಿನ ಸ್ತ್ರೀಪುರುಷರ ಪಿತೂರಿಗಳನ್ನೂ ನೀತಿ-ಅನೀತಿಗಳ ಗೊಡವೆಯಿಲ್ಲದೆ ನಿರೂಪಿಸುವುದರಲ್ಲಿ ಮತ್ತು ಸಾಧನಗಳ ಬಳಕೆಯಲ್ಲಿ ಈತ ಕೃತಕ ಹರ್ಷನಾಟಕದ (ಆರ್ಟಿಫಿಯಲ್ ಕಾಮೆಡಿ) ಸಂಪ್ರದಾಯನ್ನು ಅನುಸರಿಸಿದ. ಪ್ರಮಾದವಶಾತ್ ಪತ್ರ ಮತ್ತೊಬ್ಬರ ಕೈಗೆ ಹೋಗುವುದು, ಪರದೇಯ ಹಿಂದೆ ನಿಂತು ಹೊಂಚಿ ಕೇಳುವುದು_ಇಂಥ ಪ್ರಸಂಗಗಳನ್ನು ಕಾಂಗ್ರೀವ್ ಬಳಸಿಕೊಳ್ಳುತ್ತಾನೆ. ಆದರೆ ವಿನೋದ ಪಾತ್ರಗಳು ಇವನ ಕೈಲಿ ಜೀವಕಳೆ ಪಡೆಯುತ್ತವೆ. ಷೇಕ್ಸ್ ಪಿಯರ್ ನಂತೆ ಕಾಂಗ್ರೀವ್ ವಿನೋದ ನಾಟಕಗಳ ಜಗತ್ತಿಗೆ ಎರಡು ಬಗೆಯ ಅಮರಪಾತ್ರಗಳನ್ನು ಕೊಟ್ಟಿದ್ದಾನೆ: ಚಮತ್ಕಾರ (ವಿಟ್) ಮಿಂಚುವ ಸಂಭಾಷಣೆಯ ಪ್ರಭುಗಳು ಮತ್ತು ಹಾಸ್ಯಕ್ಕೆ ಗುರಿಯಾಗುವ ಅಹಂಕಾರಿಗಳು, ಮಂಕರು. ಲವ್ ಫಾರ್ ಲವ್ ನಂಥ ಕೆಲವು ನಾಟಕಗಳಲ್ಲಿ ವಸ್ತುನಿರ್ವಹಣೆಯಲ್ಲಿಯೂ ಕಾಂಗ್ರೀವ್ ಅಸಾಧಾರಣ ಸಾಮಥ್ರ್ಯವನ್ನು ತೋರಿಸಿದ್ದಾನೆ. ಅಲ್ಲದೆ ಕಾಂಗ್ರೀವ್ ಬರಿಯ ವಿನೋದ ಪ್ರಸಂಗಗಳನ್ನು ಚಮತ್ಕಾರದ ಸಂಭಾಷಣೆಗಳನ್ನು ಮಾತ್ರ ರಚಿಸಿದವನಲ್ಲ. ನಾಟಕಗಳ ವಾದವಿವಾದಗಳಲ್ಲಿ ಗಂಭೀರ ಯೋಚನೆ ಮತ್ತೆ ಮತ್ತೆ ಮಿಂಚುತ್ತದೆ. ಶಬ್ದಗಳ ಬಳಕೆಯಲ್ಲಿಯೂ ಅಸಾಧಾರಣ ಎಚ್ಚರಿಕೆಯನ್ನು ಇವನಲ್ಲಿ ಕಾಣುತ್ತೇವೆ. ಈ ಗುಣಗಳಿಂದ ಹಲವರು ವಿಮರ್ಶಕರು ಕಾಂಗ್ರೀವ್‍ನಲ್ಲಿ ಕವಿಯ ಚೇತನವಿತ್ತೆಂದು ಅಭಿಪ್ರಾಯ ಪಡುತ್ತಾರೆ. ಕಾಂಗ್ರೀವನ ನಾಟಕಗಳು ಕೃತಕ ಹರ್ಷನಾಟಕ ಪ್ರಕಾರದ ಉತ್ತುಂಗ ಶಿಖರವನ್ನು ಮುಟ್ಟಿದವೆನ್ನಬಹುದು. ತನ್ನ ಗುರಿಯಲ್ಲಿ ಟೆರೆನ್ಸ್ ಮತ್ತು ಮಿನ್ಟಾಂಡರ್ ರ ಪ್ರಭಾವಕ್ಕೂ ಪಾತ್ರಸೃಷ್ಟಿ ಮತ್ತು ಸಂಭಾಷಣೆಯ ನಿರ್ವಣೆಯಲ್ಲಿ ಬೆನ್ ಜಾನ್‍ಸನ್ ಮತ್ತು ಷೇಕ್ಸ್‍ಪಿಯರದ ಪ್ರಭಾವಕ್ಕೂ ಕಾಂಗ್ರೀವ್ ಒಳಗಾಗಿದ್ದಾನೆ. ತನ್ನ ಸುತ್ತ ಮುತ್ತಲಿನ ಜೀವನವನ್ನು ಪೂರ್ಣದೃಷ್ಟಿಯಿಂದಾಗಲಿ ವಾಸ್ತವಿಕವಾಗಿಯಾಗಲಿ ಚಿತ್ರಿಸಲು ಈತ ಯತ್ನಿಸಲಿಲ್ಲ. ಆದರೆ ಫ್ಯಾಷನ್ನಿನ ಆರಾಧಕರಾದ ಶ್ರೀಮಂತವರ್ಗದ ಹುಚ್ಚು ಹೆಮ್ಮೆ, ಅವರ ಹುಸಿ ಮೌಲ್ಯಗಳು-ಇವನ್ನು ಅಸಾಧಾರಣ ಪ್ರತಿಭೆಯಿಂದ ಚಿತ್ರಿಸುತ್ತಾನೆ. ಚಮತ್ಕಾರದೊಂದಿಗೆ ಕಟಕಿಯ ಬಳಕೆಯಲ್ಲಿಯೂ ಈತ ನಿಷ್ಣಾತ. ಉದಾಹರಣೆಯಾಗಿ ಈತನ ದ ವೇ ಆಫ್ ದಿ ವಲ್ರ್ಡ್ (1700) ನಾಟಕವನ್ನು ನೋಡಬಹುದು. ಇದರ ನಾಯಕ ಮಿರಬೆಲ್, ನಾಯಕಿ ಮಿಲಮಾಂಟ್. ಮಿರಬೆಲ್ ತನ್ನ ಪ್ರೇಮವನ್ನು ಬಚ್ಚಿಡಲು ಮಿಲಮಾಂಟಳ ಬಂಧು ಲೇಡಿ ವಿಷ್‍ಫೋರ್ಟ್‍ಳನ್ನು ಪ್ರೀತಿಸುವಂತೆ ನಟನೆ ಮಾಡುತ್ತಿದ್ದಾನೆ. ಅವನ ಪ್ರೇಮವನ್ನು ಪಡೆಯುವುದರಲ್ಲಿ ವಿಫಲಳಾದ ಮಿಸೆಸ್ ಮಾರ್‍ವುಡ್ ಅವನ ತಂತ್ರವನ್ನು ಲೇಡಿ ವಿಷ್‍ಫೋರ್ಟಳಿಗೆ ತಿಳಿಸುತ್ತಾಳೆ. ಇಡೀ ನಾಟಕ ತಂತ್ರ, ಪಿತೂರಿಗಳಿಂದ ತುಂಬಿಹೋಗಿದೆ. ಕಡೆಯಲ್ಲಿ ಲೇಡಿ ವಿಷ್‍ಫೋರ್ಟ್ ಮಿರಲ್‍ನನ್ನು ಕ್ಷಮಿಸಿ ಅವನು ಮಿಲಮಾಂಟಳನ್ನು ಮದುವೆಯಾಗಲು ಒಪ್ಪಿಗೆ ನೀಡುತ್ತಾಳೆ. ಸಾಹಿತ್ಯದ ದೃಷ್ಟಿಯಿಂದ ಇದನ್ನು ಕಾಂಗ್ರೀವನ ಅತಿ ಶ್ರೇಷ್ಠ ಕೃತಿ ಎನ್ನಬಹುದು. ಈ ಕೃತಿರಚನೆಯಲ್ಲಿ ತನ್ನ ಉದ್ದೇಶ ತಿದ್ದಲಾಗದ ದೋಷಗಳನ್ನು ಪಡೆದುಬಂದ ಪಾತ್ರಗಳ ಸೃಷ್ಟಿಯಲ್ಲ. ಸೋಗು ಮತ್ತು ಚಮತ್ಕಾರಗಳನ್ನು ಮರೆಯಲೆತ್ನಿಸಲು ಪಾತ್ರಗಳ ಸೃಷ್ಟಿ_ಎಂದು ಕವಿ ಪೀಠಿಕೆಯಲ್ಲಿ ಹೇಳಿದ್ದಾನೆ. ಇಲ್ಲಿನ ನಾಯಕ ನಾಯಕಿಯರ ಸಂಭಾಷಣೆ ಚಮತ್ಕಾರದ ಮಿಂಚಿನಮಾಲೆಯಾಗಿದೆ. ಮಿಲ್‍ಮಾಂಟ್ ಮತ್ತು ಮಿರ್‍ಬಲ್ ಇಂಗ್ಲಿಷ್ ವಿನೋದ ನಾಟಕದ ಜಗತ್ತಿನ ಮರೆಯಲಾಗದ ಪಾತ್ರಗಳಲ್ಲಿ ಇವರು ಸೇರಿದ್ದಾರೆ. ಈ ನಾಟಕದಲ್ಲಿ ಮಿಸೆಸ್ ಫೆಯನಾಲ್ ಮತ್ತು ಮಿಸೆಸ್ ಮಾರ್‍ವುಡ್‍ರಂಥ ಇತರ ಪಾತ್ರಗಳೂ ಸತ್ತ್ವಯುತವಾಗಿವೆ. ಸಾಮಾನ್ಯವಾಗಿ ಈ ಬಗೆಯ ನಾಟಕಗಳಲ್ಲಿ ಕಾಣಲಾಗದ ಭಾವದ ಒತ್ತಡವನ್ನು ಕಾಂಗ್ರೀವ್‍ನಲ್ಲಿ ಕಾಣಬಹುದು. ಆದರೆ ಕ್ರಿಯೆ ಅತಿ ಜಟಿಲವಾಗಿ ಪ್ರೇಕ್ಷಕರು ಅರ್ಥಮಾಡಿಕೊಳ್ಳುವಂತೆ ಅದನ್ನು ನಿರ್ವಹಿಸುವುದರಲ್ಲಿ ನಾಟಕಕಾರ ವಿಫಲನಾಗಿದ್ದಾನೆ. ಹೀಗಾಗಿ ಇಂಥ ಒಳ್ಳೆಯ ನಾಟಕ ರಂಗಭೂಮಿಯ ಮೇಲೆ ಅಯಶಸ್ವಿಯಾಯಿತು. ಇದೇ ಕಾಂಗ್ರೀವನ ಕಡೆಯ ನಾಟಕವೂ ಆಯಿತು.

 ಕಾಂಗ್ರೀವನ ನಾಟಕಗಳ ಗದ್ಯ ಬಹು ಸೊಗಸಾದುದು. ಕೋರೈಸುವ ಚಮತ್ಕಾರ, ಉಸಿರು ಬಿಗಿಹಿಡಿಸುವ ವೇಗ, ಮಿಂಚುವ ಹಾಸ್ಯ_ಇವು ಕಾಂಗ್ರೀವನ ನಾಟಕಗಳ ಸಂಭಾಷಣೆಯನ್ನು ಉಜ್ವಲಗೊಳಿಸಿವೆ. ಸಂಭಾಷಣೆಯ ಓಟ, ಮಾತಿನ ಚಕಮಕಿ ಎಷ್ಟೇ ಸಹಜವೆಂದು ತೋರಿದರೂ ಈ ಗದ್ಯದ ಹಿಂದೆ ಕೃತಿಕಾರನ ಎಚ್ಚರಿಕೆ, ಶ್ರಮ, ಉದ್ದೇಶ, ಕಲೆ ಅಡಗಿವೆ. ಮಾತಿನ ಲಯ ಮೋಹಕವಾದರೂ ಅದು ಉದ್ದೇಶಿತವೆನ್ನುವುದನ್ನು ಮರೆಯಲಾಗದು. ಗದ್ಯ ನಿಧಾನವಾಗಿ ಓದಿ ಸವಿಯಬೇಕಾದುದು. `ದ ವೇ ಆಫ್ ದ ವಲ್ರ್ಡ್' ನಲ್ಲಿ ಸಂಭಾಷಣೆ ಎಷ್ಟು ಚುರುಕಾಗಿತ್ತೆಂದರೆ ರಂಗಮಂದಿರದಲ್ಲಿ ಪ್ರೇಕ್ಷಕರಿಗೆ ಇದನ್ನು ಅರ್ಥ ಮಾಡಿಕೊಳ್ಳಲಾಗಲಿ ಸತಿಯಾಗಲಿ ಸಾಧ್ಯವಾಗಲಿಲ್ಲ. ಆದರೆ ಈ ನಾಟಕವನ್ನು ರಚಿಸಿದಾಗಿನಿಂದ ಇಂಗ್ಲೆಂಡಿನ ಅನೇಕ ಶ್ರೇಷ್ಠ ನಟಿಯರು ಮಿಲ್‍ಮಾಂಟ್‍ಳ ಪಾತ್ರವನ್ನು ಆರಿಸಿಕೊಂಡು ಅಭಿನಯಿಸಿದ್ದಾರೆ. ರೆಸ್ಟೊರೇಷನ್ ಯುಗದ ಸಾಮಾಜಿಕ ಜೀವನದ ಭಾಗವಾದ ಚಮತ್ಕಾರಯುತ ಸಂಭಾಷಣೆಯ ಉತ್ಕøಷ್ಟ ನಿದರ್ಶನ ಈ ನಾಟಕಗಳಲ್ಲಿ ಕಂಡುಬರುತ್ತದೆ. ಇವನ 'ಲವ್ ಫಾರ್ ಲವ್' ಈಗಲೂ ರಂಗಭೂಮಿಯಲ್ಲಿ ಯಶಸ್ವಿಯಾಗುತ್ತದೆ.         

(ಎಲ್.ಎಸ್.ಎಸ್.)

 

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ